ಪೆಕರಿ- 
ಆರ್ಟಿಯೋಡ್ಯಾಕ್ಟಿಲ ಗಣದ ಟಯಾಸೂಯಿಡೀ ಕುಟುಂಬಕ್ಕೆ ಸೇರಿದ ಸ್ತನಿ.  ನೋಡಲು ಹಂದಿಯಂತೆಯೇ ಕಾಣುತ್ತದೆ. ಆದರೆ ವಾಸ್ತವವಾಗಿ ಹಂದಿಯಲ್ಲ.  ಹಂದಿಗೆ ಹತ್ತಿರ ಸಂಬಂಧಿ ಮಾತ್ರ. ಇದರಲ್ಲಿ ಎರಡು ಬಗೆಗಳಿವೆ; ಒಂದು-ಉತ್ತರ ಅಮೆರಿಕದ ಟೆಕ್ಸಾಸ್, ನ್ಯೂ ಮೆಕ್ಸಿಕೊ, ಆರಿಜೋನಗಳಿಂದ ದಕ್ಷಿಣದಲ್ಲಿ ಪಟಗೋನಿಯವರೆಗಿನ ಪ್ರದೇಶದಲ್ಲಿ ಕಾಣಬರುವ ಕಾಲರ್ಡ್ ಪೆಕರಿ (ಟಯಾಸು ಟಜಾಸು) ಮತ್ತು ಎರಡು-ದಕ್ಷಿಣ ಮೆಕ್ಷಿಕೊದಿಂದ ಪರಗ್ವೆವರೆಗೆ ವಿಸ್ತರಿಸಿರುವ ಪ್ರದೇಶದಲ್ಲಿ ವಾಸಿಸುವ ಬಿಳಿತುಟಿಯ ಪೆಕರಿ (ಟಯಾಸು ಪೆಕರಿ).  ಮೊದಲನೆಯದು ಮರುಭೂಮಿ ಮತ್ತು ಶುಷ್ಕ ಬಗೆಯ ಕಾಡುಗಳಲ್ಲಿ ವಾಸಿಸುತ್ತಾದರೆ ಎರಡನೆಯದು ತೇವಪೂರಿತ ಉಷ್ಣವಲಯ ಕಾಡುಗಳಲ್ಲಿ ಜೀವಿಸುತ್ತದೆ.

	ಪೆಕರಿ ಸುಮಾರು 1 ಮೀಟರ್ ಉದ್ದದ ಪ್ರಾಣಿ. ಇದರ ಎತ್ತರ ಸುಮಾರು ಅರ್ಧ ಮೀಟರು. ತೂಕ 16-30 ಕೆ.ಜಿ. ಇದಕ್ಕೆ 15-55 ಮಿ.ಮೀ. ಉದ್ದದ ಬಾಲ ಉಂಟು.  ಬಿಳಿ ತುಟಿಯ ಪೆಕರಿ ಕಾಲರ್ಡ್ ಪೆಕರಿಗಿಂತ ಕೊಂಚ ದೊಡ್ಡ ಗಾತ್ರದ್ದು. ದೇಹದ ಬಣ್ಣ ಬಿಳಿ ತುಟಿಯ ಪೆಕರಿಯಲ್ಲಿ ಕಗ್ಗಂದು (ತುಟಿಯ ಆಚೀಚೆ ಬಿಳಿ ಬಣ್ಣದ ಮಚ್ಚೆಯುಂಟು.) ಕಾಲರ್ಡ್ ಪೆಕರಿ ಗಾಢ ಬೂದಿ ಬಣ್ಣಕ್ಕಿದೆ.  ಇದರ ಕತ್ತಿನಲ್ಲಿ ಬಿಳಿಯ ಪಟ್ಟೆಯುಂಟು.  ಪೆಕರಿಗಳ ಮುಂಗಾಲಿನಲ್ಲಿ 4 ಬೆರಳುಗಳೂ ಹಿಂಗಾಲಿನಲ್ಲಿ 3 ಬೆರಳುಗಳೂ ಉಂಟು.  ಕಾಲುಗಳ ಮೂರನೆಯ ಮತ್ತು ನಾಲ್ಕನೆಯ ಮೂಳೆಗಳು ಪರಸ್ಪರ ಕೂಡಿಕೊಂಡಿವೆ.  ಹಂದಿಗಳಲ್ಲಾದರೋ ಈ ಮೂಳೆಗಳು ಬೇರೆ ಬೇರೆಯಗಿವೆ.  ಪೆಕರಿಗಳ ಮುಸುಡು ಹಂದಿಗಳದರಂತೆಯೇ ಉದ್ದವಾಗಿದ್ದು ಮೃದ್ವಸ್ಥಿಯಿಂದ ರಚಿತವಾಗಿದೆ.  ಅಂತೆಯೇ ಚಲಿಸಬಲ್ಲದು. ಬಾಲದಿಂದ ಕೊಂಚ ದೂರದಲ್ಲಿ ಬೆನ್ನ ಮೇಲೆ ಸುಗಂಧ ಗ್ರಂಥಿಯೊಂದು ಉಂಟು. ಪೆಕರಿ ಉದ್ರೇಕಿತವಾದಾಗ ಬೆನ್ನು ಮತ್ತು ಕತ್ತಿನ ಮೇಲಿನ ಕೂದಲುಗಳು ನಿಮಿರಿ ನಿಲ್ಲುವುವಲ್ಲದೆ, ಈ ಗ್ರಂಥಿಯಿಂದ ಕಟು ವಾಸನೆ ಹೊರಸೂಸುವುದು.

	ಪೆಕರಿಯ ಮೇಲ್ದವಡೆಯಲ್ಲಿರುವ ಕೋರೆ ಹಲ್ಲುಗಳು ಕೆಳಮುಖವಾಗಿ ಹೊರಚಾಚಿಕೊಂಡಿವೆ. ಹಂದಿಗಳಲ್ಲಾದರೆ ಈ ಹಲ್ಲುಗಳು ಮೇಲ್ಮುಖವಾಗಿ ಹಾಗೂ ಹೊರಮುಖವಾಗಿ ಚಾಚಿಕೊಂಡಿರುವುವು. 
ಕಾರ್ಡ್ ಪೆಕರಿಗಳು 5-15 ಪ್ರಾಣಿಗಳನ್ನೊಳಗೊಂಡ ಸಣ್ಣ ಗುಂಪುಗಳಲ್ಲಿ ವಾಸಿಸುವುವಾದರೆ, ಬಿಳಿ ತುಟಿಯ ಬಗೆಯವು 50-100 ಕ್ಕೂ ಹೆಚ್ಚಿನ ಸಂಖ್ಯೆಯ ಗುಂಪುಗಳಲ್ಲಿರುವುವು. ಗುಂಪಿಗೆ ನಿರ್ದಿಷ್ಟ ನಾಯಕನಿಲ್ಲ. ತಮ್ಮ ಪಾಡಿಗೆ ತಮ್ಮನ್ನು ಬಿಟ್ಟರೆ ಪೆಕರಿಗಳು ಮನುಷ್ಯನ ತಂಟೆಗೆ ಬರುವುದಿಲ್ಲ.  ಆದರೆ ಗುಂಪಿನ ಯಾವುದೇ ಪ್ರಾಣಿಯನ್ನು ಘಾಸಿಗೊಳಿಸಿದರೆ ಇಲ್ಲವೇ ಬೆನ್ನಟ್ಟಿದ್ದರೆ ಇಡೀ ಗುಂಪೇ ಶತ್ರುವಿನ ಮೇಲೆರಗುವ ಪ್ರವೃತ್ತಿಯನ್ನು ತೋರುವುವು.  ತಮ್ಮ ಸಹಜ ಶತ್ರುಗಳಾದ ನಾಯಿ, ಕಯೋಟ್‍ಗಳೊಂದಿಗೆ ಬಲು ಉಗ್ರವಾಗಿ ಕಾದಾಡಿ ಅವನ್ನು ಹಿಮ್ಮೆಟ್ಟಿಸುವುವು. 

	ಇವು ರಾತ್ರಿಯ ವೇಳೆ ಇಲ್ಲವೇ ತಂಪು ಹೊತ್ತಿನಲ್ಲಿ ತಮ್ಮ ಪ್ರಧಾನ ಆಹಾರವಾದ ಹಣ್ಣು, ಗೆಡ್ಡೆಗೆಣಸು, ಕಂದಪ್ರಕಂದಗಳನ್ನು ಅರಸುತ್ತ ಓಡಾಡುವುವು.  ಹಗಲಿನಲ್ಲಿ ಪೊದೆ ಇಲ್ಲವೇ ಕಲ್ಲು ಪೊಟರೆಗಳ ನಡುವೆ ವಿಶ್ರಮಿಸುವುವು. ಹಾಗಾಗಿ ಮರಿ ಕೀಟಗಳನ್ನು ತಿನ್ನುವುದುಂಟು.

	ವರ್ಷದ ಯಾವುದೇ ಕಾಲದಲ್ಲಿ ಮರಿ ಹಾಕಬಹುದು.  ಗರ್ಭಧಾರಣೆಯ ಅವಧಿ 142-148 ದಿವಸಗಳು. ಸಾಮಾನ್ಯವಾಗಿ ಒಂದು ಸೂಲಿಗೆ 2 ಮರಿಗಳು ಹುಟ್ಟುತ್ತವೆ.  ಹುಟ್ಟಿದ ಮರಿಗಳು ಕೆಲವೇ ಗಂಟೆಗಳಲ್ಲಿ ಓಡಾಡಬಲ್ಲವು.  6-8 ವಾರಗಳ ಕಾಲ ತಾಯ ಹಾಲು ಕುಡಿದು ಬೆಳೆಯುವ ಮರಿಗಳು 2-3 ತಿಂಗಳ ಅನಂತರ ಬೇರೆ ಹೋಗಬಹುದು. ಪೆಕರಿ ಸಾಮಾನ್ಯವಾಗಿ 20 ವರ್ಷ ಬದುಕುತ್ತದೆ.  ಪೆಕರಿಗಳನ್ನು ಮಾಂಸಕ್ಕಾಗಿ, ಚರ್ಮಕ್ಕಾಗಿ ಬೇಟೆಯಾಡುವುದನ್ನು ವಿರೋಧಿಸುವ ಮನೋಭಾವ ಈಗ ಹೆಚ್ಚು ಕಂಡುಬರುತ್ತಿದೆ.
(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ